ನಾಗರಾಜ ಕವಿ : - 
ಸು. 1331 "ಪುಣ್ಯಾಸ್ರವ"ವೆಂಬ ಚಂಪೂ ಗ್ರಂಥವನ್ನು ರಚಿಸಿದ ಜೈನ ಕವಿ. ಈ ಕೃತಿ ಚಂಪೂ ಶೈಲಿಯಲ್ಲಿರುವ ಒಂದು ಕಥಾಪ್ರಬಂಧ. ಈತ ಪೊನ್ನ, ಪಂಪ, ಗಜಾಂಕುಶ, ಬಂಧುವರ್ಮ, ಗುಣವರ್ಮ, ನಾಗಚಂದ್ರ ಮುಂತಾದ ಪೂರ್ವಕವಿಗಳನ್ನು ಸ್ತುತಿಸಿದ್ದಾನೆ. ಅದರಲ್ಲಿಯೂ ಬಂಧುವರ್ಮನನ್ನು ವಿಶೇಷವಾಗಿ ಹೊಗಳಿದ್ದಾನೆ. ಈತನಿಗೆ ಕವಿತಾಕಲ್ಪವಲ್ಲೀವಸಂತ, ಭಾರತೀಭಾಳ ನೇತ್ರ, ಸರಸ್ವತಿಮುಖತಿಲಕ, ಕವಿಮುಖಮುಕುರ ಎಂಬ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಅಧಿಕಾರಾಂತ್ಯಗಳಲ್ಲಿ ಶ್ರೀಮನ್ಮಾಸಿನಿವಾಳದ ನಾಗರಾಜ ವಿರಚಿತಮಪ್ಪ ಪುಣ್ಯಾಸ್ರವದೊಳ್ ಎಂಬ ಗದ್ಯವಿದೆ. ಇದರಿಂದ ಈತ ಮಾಸಿವಾಳದ ನಾಗರಾಜನೆಂದು ತಿಳಿದುಬರುತ್ತದೆ. ಈತನ ತಂದೆ ಸೇಚೆಂಬಪುರದಲ್ಲಿ ಜಿನಶಾಸನದೀಪಕನಾದ ವಿವೇಕ ವಿಟ್ಠಲದೇವ, ತಾಯಿ ಭಾಗೀರಥಿ ; ಸಹೋದರ ತಿಪ್ಪರಸ ; ಗುರು ಅನಂತವೀರ್ಯ.

ಮುನ್ನಂ ಸಂಸ್ಕøತದಿಂದ
ತ್ಯುನ್ನತಿವೆತ್ತಿರಲ್ ಕೇಳ್ದು ಸಗರದ ನಗರಂ
ಕನ್ನಡಿಸೆನೆ ನಾಗೇಂದ್ರಂ
ಕನ್ನಡಿಸಿದನೊಲಿದು ನೋಡಿ ಪುಣ್ಯಾಸ್ರವಮಂ

ಎಂದು ತನ್ನ ಕಾವ್ಯರಚನೆಗೆ ಕಾರಣವನ್ನು ಹೇಳಿ ಸಂಸ್ಕøತ ಗ್ರಂಥವನ್ನು ಕನ್ನಡಿಸಿದಂತೆ ಹೇಳಿಕೊಂಡಿದ್ದಾನೆ. ಆದರೆ, ಪೂರ್ಣವಾಗಿ ಮೂಲದ ಅನುವಾದವಾಗಿಲ್ಲ. ರಾಮಚಂದ್ರ ಮುಮುಕ್ಷುವಿನ ಸಂಸ್ಕøತದ ಪುಣ್ಯಾಸ್ರವ ಕಥಾಕೋಶ ಗ್ರಂಥವನ್ನೇ ಮೂಲವಾಗಿಟ್ಟುಕೊಂಡು ರಚಿಸಿದ ಕಥಾ ಪ್ರಬಂಧವಾಗಿದೆ. ಈತ ಮೂಲದ ಕೆಲವು ಭಾಗಗಳನ್ನು ಅನುವಾದ ಮಾಡಿದ್ದರೆ, ಮತ್ತೆ ಕೆಲವನ್ನು ಹಿಗ್ಗಿಸಿರುವುದೂ, ಕುಗ್ಗಿಸಿರುವುದೂ ಉಂಟು. ತನ್ನ ಗುರು ಅನಂತವೀರ್ಯನ ಆಜ್ಞಾನುಸಾರವಾಗಿ ಈ ಗ್ರಂಥವನ್ನು ರಚಿಸಿದಂತೆಯು ಆತನೇ ಇದನ್ನು ತಿದ್ದಿ ಅಂದಗೊಳಿಸಿದಂತೆಯೂ ಹೇಳಿಕೊಂಡಿದ್ದಾನೆ.
ಈ ಗ್ರಂಥ ಹನ್ನೆರಡು ಅಧಿಕಾರಗಳಾಗಿ ವಿಭಾಗಿಸಲ್ಪಟ್ಟು ಪೂಜೆ, ಗುರೂಪಾಸ್ತಿ, ಸ್ವಾಧ್ಯಾಯ, ಸಂಯಮ, ದಾನ, ತಪಸ್ಸು-ಮೊದಲಾದ ಗೃಹಸ್ಥಧರ್ಮಗಳ ನಿರೂಪಣೆಗಳನ್ನೊಳಗೊಂಡಿದೆ. ಈ ತತ್ತ್ವ ನಿರೂಪಣೆ ಸ್ವರ್ಗಾಪವರ್ಗಂಗಳ ನೇಯ್ದಿದ ಪುರಾಣಪುರುಷರ ಕಥೆಗಳ ಮೂಲಕ ನಡೆದಿದೆ.ಇದರಲ್ಲಿ ಒಟ್ಟು ೫೭ ಕಥೆಗಳಿವೆ. ಈತನ ಕವಿತಾಬಂಧ ಲಿಲಿತ, ಸುಂದರ.	 
(ಎಸ್.ಬಿ.ಎಸ್.; ಕೆ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ